ಅಪಘಾತದಲ್ಲಿ ಮೂರು ಸಾವು: ಮಗನಿಗೆ ಕಾರು ಕೊಟ್ಟು ಜೈಲು ಸೇರಿದ ತಂದೆ!

ಮೈಸೂರು: ಕ್ರೇಜ್‌ಗೆ ಕಾರು ಓಡಿಸಿದ ಬಾಲಕ ಮೂವರ ಸಾವಿಗೆ ಕಾರಣನಾದ. ಮಗ ಕಾರು ಓಡಿಸುವುದನ್ನು ಒಳಗೊಳಗೆ ಖುಷಿ ಪಡುತ್ತಿದ್ದ ತಂದೆ ಜೈಲಿಗೆ ಹೋಗುವ ಸನ್ನಿವೇಶ! ಗುರುವಾರ ನಡೆದ ಕಾರು ಹಾಗೂ ಬೈಕ್ ಅಪಘಾತದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ಮೃತಪಟ್ಟಿದ್ದಾರೆ. ಇದು ಮನ ಕಲಕುವ ವಿಚಾರ. ಆದರೆ, ಕಾರನ್ನು ಚಲಾಯಿಸುತ್ತಿದ್ದುದು ೧೪ ವರ್ಷದ ಬಾಲಕ ಎಂಬುದು ಮಾತ್ರ ಆಶ್ಚರ್ಯಕರ ವಿಚಾರ. ಇದೀಗ ಪೊಲೀಸರು ಬಾಲಕನ ತಂದೆಯನ್ನು ವಶಕ್ಕೆ ಪಡೆದಿದ್ದಾರೆ.

ಆತ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಅವರ ತಂದೆ ಕಾರು ಮಾರಾಟ ಮಳಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಾಲಕನಿಗೆ ಹಲವಾರು ದಿನಗಳಿಂದ ಕಾರು ಚಲಾಯಿಸುವ ಹುಚ್ಚು. ಹೀಗಾಗಿ ತಂದೆ ತರುತ್ತಿದ್ದ ಕಾರನ್ನು ಆಗಾಗ್ಗೆ ಓಡಿಸುತ್ತಿದ್ದ. ಈ ವಯಸ್ಸಿನಲ್ಲಿ ಮಗ ಕಾರನ್ನು ಓಡಿಸುತ್ತಿದ್ದಾನಲ್ಲಾ ಎಂದು ಅವರು ಒಳಗೊಳಗೇ ಖುಷಿ ಪಡುತ್ತಿದ್ದರೇನೋ. ಆದರೆ, ಮುಂದೊಂದು ದಿನ ಮಗನ ಈ ಕ್ರೇಜ್‌ನಿಂದ ನಾನು ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ ಎಂಬುದು ಅವರ ಅರಿವಿಗೆ ಬಂದಿರಲಿಲ್ಲ.

ಎಂದಿನಂತೆ ಬಾಲಕನ ತಂದೆ ಗುರುವಾರ ರಾತ್ರಿ ೮ ಗಂಟೆಗೆ ಮನೆಗೆ ಬಂದಿದ್ದಾರೆ. ಜೊತೆಗೆ ಮಾರಾಟ ಮಳಿಗೆಯ ಟ್ರಯಲ್ ಕಾರನ್ನು ತಂದಿದ್ದಾರೆ. ಕಾರನ್ನು ಮನೆಯ ಮುಂದೆ ನಿಲ್ಲಿಸಿ ಅನ್ಯ ಕೆಲಸದ ನಿಮಿತ್ತ ದ್ವಿಚಕ್ರ ವಾಹನದಲ್ಲಿ ತೆರಳಿದ್ದಾರೆ.
ಇದೇ ಸಮಯ ಸಾಧಿಸಿದ ಬಾಲಕ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಆಗಾಗ್ಗೆ ಮನೆಯ ಸುತ್ತಮುತ್ತ ರೌಂಡ್ ಹಾಕುತ್ತಿದ್ದ ಬಾಲಕ ಗುರುವಾರ ಮಾತ್ರ ಧೈರ್ಯ ಮಾಡಿ ಬೆಂಗಳೂರು-ಮೈಸೂರು ರಸ್ತೆಗೆ ತೆರಳಿದ್ದಾನೆ. ಕಾರನ್ನು ಅತಿ ವೇಗದಿಂದ ಚಾಲನೆ ಮಾಡುವ ಮೂಲಕ ಅಪಘಾತವೆಸಗಿದ್ದಾನೆ. ಅಪಘಾತದ ವೇಳೆ ಕಾರಿನ ಒಳಗಿದ್ದ ಸೇಫ್ಟಿ ಬಲೂನ್‌ಗಳು ತೆರೆದುಕೊಂಡ ಕಾರಣ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಆತನ ತಪ್ಪಿನಿಂದ ಅಪಘಾತದಲ್ಲಿ ಮೂವರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ.

ಸಂಚಾರ ನಿಯಮ ಪಾಠ ಹೇಳಿದ್ದ ಎಸಿಪಿ: ವಿಪರ್ಯಾಸವೆಂದರೆ ಕೆಲ ತಿಂಗಳ ಹಿಂದಷ್ಟೇ ಸಂಚಾರ ವಿಭಾಗದ ಎಸಿಪಿ ಸಂದೇಶ್ ಅವರು ಬಾಲಕ ಓದುತ್ತಿದ್ದ ಶಾಲೆಗೆ ತೆರಳಿ ಸಂಚಾರ ನಿಯಮದ ಬಗ್ಗೆ ಪಾಠ ಹೇಳಿದ್ದರು. ನೀವುಗಳು ಯಾವುದೇ ಕಾರಣಕ್ಕೂ ವಾಹನ ಚಾಲನೆಗೆ ಮುಂದಾಗಬಾರದು ಎಂದು ತಿಳಿಹೇಳಿದ್ದರಂತೆ. ಈ ವಿಚಾರವನ್ನು ಸ್ವತಃ ಬಾಲಕನೇ ಪೊಲೀಸರ ಮುಂದೆ ಹೇಳಿದ್ದಾನೆ!


ಕಣ್ಣೀರು ಹಾಕಿದ ಪೋಷಕರು: ಮಗ ಮಾಡಿದ ತಪ್ಪಿನಿಂದ ಮೂವರು ಸಾವಿಗೀಡಾಗಿದ್ದುದನ್ನು ನೆನೆದು ಬಾಲಕನ ಪೋಷಕರು ಕಣ್ಣೀರು ಹಾಕಿದ್ದಾರೆ. ಯಾವುದೇ ಪೋಷಕರು ಮಕ್ಕಳ ನಡೆಯ ಬಗ್ಗೆ ನಿಗಾ ವಹಿಸಬೇಕು. ಇಲ್ಲವಾದಲ್ಲಿ ನಮ್ಮಂತೆ ತೊಂದರೆ ಅನುಭವಿಸಬೇಕಾಗಬಹುದು ಎಂದು ಮನವಿ ಮಾಡಿದ್ದಾರೆ.

೨ ವರ್ಷ ಜೈಲು ಶಿಕ್ಷೆ: ನಿಯಮದ ಪ್ರಕಾರ ಯಾವುದೇ ಪ್ರಕರಣದಲ್ಲಿ ಅಪ್ರಾಪ್ತರು ವಾಹನ ಚಾಲನೆ ಮಾಡಿ ಅಪಘಾತ ನಡೆಸಿದಲ್ಲಿ ಬಾಲಕರ ಪೋಷಕರೇ ಹೊಣೆಗಾರರಾಗುತ್ತಾರೆ. ಅವರ ವಿರುದ್ಧವೇ ಎಫ್‌ಐಆರ್ ದಾಖಲಾಗುತ್ತದೆ. ವಿಚಾರಣೆ ವೇಳೆ ನ್ಯಾಯಾಲಯ ಅವರಿಗೆ ಕನಿಷ್ಠ ೨ ವರ್ಷ ಶಿಕ್ಷೆ ವಿಧಿಸುವ ಸಾಧ್ಯತೆಗಳಿವೆ. ಈ ಪ್ರಕರಣದಲ್ಲಿ ಕೂಡ ಪೊಲೀಸರು ಬಾಲಕನ ತಂದೆ ವಿರುದ್ಧ ಎನ್‌ಆರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ʻಮಕ್ಕಳು ವಾಹನ ಕಲಿಯಬೇಕು ನಿಜ. ಹಾಗೆಂದು ಬೇಕಾಬಿಟ್ಟಿ ಓಡಿಸುವುದು, ಮುಖ್ಯ ರಸ್ತೆಗಳಲ್ಲಿ ಓಡಿಸಿ ತೊಂದರೆಗೆ ಸಿಲುಕುವುದು ಬೇಡ. ಪೋಷಕರು ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು.ʼ

-ಸಂದೇಶ್‌ಕುಮಾರ್, ಎಸಿಪಿ ಸಂಚಾರ ವಿಭಾಗ

Post a Comment

0 Comments