ದೇಶದ 80% ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ ಇಲ್ಲದಿರುವಾಗ ಹೊಸ ಸಂಸತ್‌ ಭವನ ಅವಶ್ಯಕವೇ?

ಮೈಸೂರು: ಕೋವಿಡ್-೧೯ ನೆಪಹೇಳಿ ಎಳ್ಳುನೀರು ಬಿಟ್ಟಿರುವ ‘ಶುಚಿ’ ಯೋಜನೆಯನ್ನು ರಾಜ್ಯ ಸರ್ಕಾರ ಮುಂದುವರಿಸುವಂತೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಆಗ್ರಹಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಋತುಸ್ರಾವದ ಶುಚಿತ್ವದ ಬಗ್ಗೆ ಅರಿವು ಮೂಡಿಸಲು ಹಿಂದಿನ ಸರ್ಕಾರ ಆರಂಭಿಸಿದ ‘ಶುಚಿ’ ಯೋಜನೆಯನ್ನು ಕೊರೊನಾ ನೆಪಹೇಳಿ ಇಂದಿನ ಸರ್ಕಾರ ಸಾಯಿಸಿ ಬಿಟ್ಟಿದೆ. ಈ ಯೋಜನೆ ಸ್ಥಗಿತವಾಗಿರುವುದರಿಂದ ಬಡ ಹೆಣ್ಣು ಮಕ್ಕಳು ನರಕಯಾತನೆ ಪಡುವಂತಾಗಿದೆ ಎಂದು ಭಾವನಾತ್ಮಕವಾಗಿ ವಿವರಿಸಿದರು.

ಇದು ರಾಜಕೀಯ ಮಾಡುವ ವಿಚಾರವಲ್ಲ, ಗ್ರಾಮೀಣ ಪ್ರದೇಶದ ಬಡ ಹೆಣ್ಣು ಮಕ್ಕಳು ಸ್ಯಾನಿಟರಿ ಖರೀದಿಸಲಾಗದಷ್ಟು ತೊಂದರೆ ಸಿಲುಕಿದ್ದಾರೆ. ಇಂತಹ ಘಳಿಗೆಯಲ್ಲಿ ರಾಜ್ಯ ಸರ್ಕಾರ ಗಂಭೀರವಾದ ‘ಶುಚಿ’ ಯೋಜನೆ ತಿಲಾಂಜಲಿ ಬಿಟ್ಟಿರುವುದು ಸರಿಯಲ್ಲ. ಕೂಡಲೇ ಯೋಜನೆಯನ್ನು ಜಾರಿಗೆ ತರಬೇಕು. ಈ ಬಗ್ಗೆ ಶೋಭಾಕ್ಕ ಮತ್ತು ಶಶಿಕಲಾ ಜೊಲ್ಲೆ ಬಿಜೆಪಿ ಮಹಿಳಾ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.

ಈ ಹಿಂದಿನ ಸರ್ಕಾರದಲ್ಲಿ ಹೆಣ್ಣು ಮಕ್ಕಳ ನೈಸರ್ಗಿಕ ಸಮಸ್ಯೆ ಬಗ್ಗೆ ಕಾಳಜಿ ವಹಿಸಿ ಬಡಕುಟುಂಬ ಹೆಣ್ಣು ಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್, ನ್ಯಾಪ್ಕಿನ್ ವಿತರಿಸಲು ಮುಂದಾಯಿತು. ಆ ಮೂಲಕ ರಾಜ್ಯದ ೨೯ ಲಕ್ಷ ಬಡ ಹೆಣ್ಣು ಮಕ್ಕಳಿಗೆ ಉಚಿತವಾಗಿ ನ್ಯಾಪ್ಕಿನ್ ವಿತರಿಸಿ ನೆರವಾಯಿತು. ಸಂವಿಧಾನ ಅರ್ಟಿಕಲ್ ೨೧ರ ಪ್ರಕಾರ ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನು ಉಚಿತವಾಗಿ ನೀಡಬೇಕೆಂದು ಪ್ರತಿಪಾದಿಸಿದೆ. ಹೀಗಾಗಿ ಪಡಿತರ ವ್ಯವಸ್ತೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಚಿತ ನ್ಯಾಪ್ಕಿನ್, ಸ್ಯಾನಿಟರಿ ಪ್ಯಾಡ್ ವಿತರಿಸುವ ಯೋಜನೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಶೇ.೮೦ರಷ್ಟು ಹೆಣ್ಣು ಮಕ್ಕಳು ಸ್ಯಾನಿಟರಿ ಕೊಂಡುಕೊಳ್ಳಲು ಪರದಾಡುತ್ತಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ತು ನಿರ್ಮಾಣಕ್ಕೆ ಸಾವಿರಾರು ಕೋಟಿ ರೂ.ಮೀಸಲಿಟ್ಟಿದ್ದಾರೆ. ಭಾಷಣಗಳಲ್ಲಿ ಭೇಟಿ ಬಚಾವೋ-ಭೇಟಿ ಪಾಡವೋ ಎಂದು ಹೇಳುವ ಪ್ರಧಾನಿಗಳು ಹೆಣ್ಣು ಮಕ್ಕಳ ರಕ್ಷಣೆಯನ್ನು ಮರೆತು ಬಿಟ್ಟಿದ್ದಾರೆ. ಸಂಸತ್ ಭವನ ಕಟ್ಟಲು ನಮ್ಮ ತಕಾರಾರಿಲ್ಲ. ಕಿತ್ತು ತಿನ್ನುವ ಬಡತನ ಉದ್ಭವಿಸಿರುವ ಪ್ರಸ್ತುತ ಸಂದರ್ಭದಲ್ಲಿ ನೂತನ ಸಂಸತ್ ಬೇಕೇ? ನಿಜವಾಗಿಯೂ ನರೇಂದ್ರ ಮೋದಿ ಅವರಿಗೆ ಹೆಣ್ಣು ಮಕ್ಕಳ ಮೇಲೆ ಕಾಳಜಿ ಇದ್ದರೆ ಉಚಿತ ಸ್ಯಾನಿಟರಿ ನೀಡುವ ಯೋಜನೆ ತರಲಿ ಎಂದು ಸವಾಲೆಸದರು.

ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ನೀಡುವಂತೆ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಲತಾ ಸಿದ್ದಶೆಟ್ಟಿ, ಮಾಜಿ ಮಹಾಪೌರರಾದ ಪುಷ್ಪವಲ್ಲಿ, ಪುಷ್ಪಲತಾ ಚಿಕ್ಕಣ್ಣ, ಡಾ.ಟಿ.ಎಸ್.ಸುಜಾತ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Post a Comment

0 Comments