ಡಿಸಿಸಿ ಬ್ಯಾಂಕ್ ನೂತನ ನಾಮನಿರ್ದೇಶಕ ಸಿ.ಪಿ. ಉಮೇಶ್‍ಗೆ ಅಧ್ಯಕ್ಷ ಸ್ಥಾನ!


 ಕುತೂಹಲ ಕೆರಳಿಸಿದ್ದ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ರಾಗಿ ಅಚ್ಚರಿ ಎಂಬಂತೆ ಬಿಜೆಪಿಯ ಸಿ.ಪಿ.ಉಮೇಶ್ ಆಯ್ಕೆಯಾಗುವುದು ಖಚಿತವಾಗಿದೆ. ಇದರೊಂದಿಗೆ ಬಹುಮತ ಹೊಂದಿದ್ದ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿ ಮುಖಭಂಗ ಅನುಭವಿಸಿದೆ.
ಡಿಸಿಸಿ ಬ್ಯಾಂಕ್ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ನಾಮನಿರ್ದೇಶಕ ಸ್ಥಾನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಿ.ಪಿ.ಉಮೇಶ್ ಅವರನ್ನು ನೇಮಕ ಮಾಡಿ ಶುಕ್ರವಾರವಷ್ಟೇ ಆದೇಶ ಹೊರಡಿಸಿದ್ದಾರೆ. ಅವರನ್ನೇ ಅಧ್ಯಕ್ಷ ಸ್ಥಾನಕ್ಕೆ ಕೂರಿಸಿ, ಜೆಡಿಎಸ್ ಬೆಂಬಲಿತ ನಿರ್ದೇಶಕರೊಬ್ಬರಿಗೆ ಉಪಾಧ್ಯಕ್ಷ ಸ್ಥಾನ ನೀಡುವ ಬಗ್ಗೆ ನಿರ್ಧಾರವಾಗಿದೆ.
ಮದ್ದೂರು ತಾಲೂಕು ಕೊಪ್ಪ ಹೋಬಳಿಯ ಚಿಕ್ಕದೊಡ್ಡಿ ಗ್ರಾಮದವರಾಗಿರುವ ಸಿ.ಪಿ.ಉಮೇಶ್, ಹಾಲಿ ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ಉದ್ಯಮಿಯಾಗಿದ್ದಾರೆ. ಸಿ.ಪಿ.ಉಮೇಶ್ ತಂದೆ ಪುಟ್ಟಸ್ವಾಮಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಒಡನಾಡಿಯಾಗಿರುವ ಸಿ.ಪಿ.ಉಮೇಶ್ ಬೆಂಗಳೂರಿನಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಿ.ಪಿ.ಉಮೇಶ್ ನೇಮಕಕ್ಕೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಸೆಯಾಗಿ ನಿಂತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಶಿಫಾರಸು ಮಾಡಿದ್ದರು. ಈ ಸದಾವಕಾಶವನ್ನು ಬಳಸಿಕೊಂಡ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‍ಗೆ ಪ್ರತಿತಂತ್ರ ಎಣೆದು ಕಾಂಗ್ರೆಸ್‍ನಿಂದ ಬಂಡಾಯವೆದ್ದಿದ್ದ ಅಮರಾವತಿ ಅಶ್ವಥ್ ಅವರನ್ನು ಸೆಳೆದು ತನ್ನ 4 ಮಂದಿ ಸದಸ್ಯರು ಮತ್ತು ಮತದಾನದ ಹಕ್ಕು ಹೊಂದಿರುವ ಮೂವರು ಅಧಿಕಾರಿಗಳು ಹಾಗೂ ಸರ್ಕಾರದ ನಾಮನಿರ್ದೇಶಿತ ನಿರ್ದೇಶಕ ಸಿ.ಪಿ.ಉಮೇಶ್ ಬೆಂಬಲಿಗರೊಂದಿಗೆ ಅಧಿಕಾರಕ್ಕೇರಲು ಸಹಕಾರಿಯಾಗಿದೆ.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಎದುರಾದ ಅತಂತ್ರ ಫಲಿತಾಂಶ ಹಾಗೂ ಅಧ್ಯಕ್ಷ ಸ್ಥಾನದ ವಿಚಾರವಾಗಿ ಉಂಟಾದ ಒಡಕಿನ ಲಾಭ ಪಡೆದು ಬಿಜೆಪಿ ಮತ್ತು ಜೆಡಿಎಸ್ ಅಧಿಕಾರ ಹಿಡಿಯಲು ನಡೆಸಿದ ತಂತ್ರಗಾರಿಕೆ ಯಶಸ್ಸು ಕಂಡಿದೆ.
ಎಲ್ಲರೊಳಗೊಂದಾಗು ಮಂಕುತಿಮ್ಮ

Post a Comment

0 Comments